Feb 6, 2014

Where were you my love

ಒಂದು ಮುಸ್ಸಂಜೆ ಹಾಗೇ ನಡೆಯುತ್ತಿದ್ದೇನೆ. ಪ್ರಾತಃಕಾಲದ ಸಂಧ್ಯಾಕಿರಣದಂತೆ ಆತ ಎದುರಾದ. ಮೊದಲ ಪರಿಚಯ. ಕಣ್ಣು ಮಾತನಾಡಿಕೊಂಡವು. Impression at first sight. ಮನಸ್ಸಿನಲ್ಲಿ ಆಲೋಚನೆಗಳ ಸುಂಟರಗಾಳಿಯೆಬ್ಬಿಸಿ ಆತ ಹೊರಟುಹೋದ.

ಷಿಕಾಯತ್ ಮಾಡಬೇಕೆನಿಸುತ್ತಿದೆ, ಆದರೆ ಯಾರಿಗೆ ಹೇಳಬೇಕೋ ತಿಳಿಯುತ್ತಿಲ್ಲ. ಈಗ ಪರಿಚಯವಾಗಬೇಕೇ ಇವನು? ಇಷ್ಟೊಂದು ತಡವಾಗಿ? ಒಬ್ಬನ ಜೊತೆ ಕಮಿಟ್ ಆಗಿ, ಅವನೊಡನೆ ಸಂಸಾರ ಮಾಡಿ, ಮಕ್ಕಳನ್ನು ಹೆತ್ತು, ಇದ್ದ ಅಂದವೆಲ್ಲ ಕರಗಿಹೊಯ್ತಲ್ಲ ಎಂದು ಕೊರಗಿಕೊಂಡು, ಪ್ರೇಮ ಋತುವು ಮುಗಿದುಹೊಯ್ತಲ್ಲ ಅಂದುಕೊಳ್ಳುತ್ತಿರುವಾಗಲೇ, ನನ್ನ ಭ್ರಮೆಯನ್ನು ಓಡಿಸಿ ಪ್ರೇಮದ ಚಾಪ್ಟರ್ ತೆರೆಸಿದ್ದಾನಲ್ಲ ಇವನು!?

ಎಷ್ಟೋ ಜನ ಪರಿಚಿತರಾಗುತ್ತಾರೆ. ಜೀವನದ ರಹದಾರಿಯಲ್ಲಿ ಗುರುತುಗಳೇನನ್ನೂ ಉಳಿಸದೆ ಬಂದ ದಾರಿಯಲ್ಲೇ ಹೊರಟು ಹೋಗುತ್ತಾರೆ. ಕೆಲವರು ಕಡೆಯವರೆಗು ನಡೆದು ಸ್ನೇಹಿತರಾಗುತ್ತಾರೆ. ಇವನು, ಯಾವುದೇ ಅಪಾಯಿಂಟ್‍ಮೆಂಟ್ ಇಲ್ಲದೇ ನೇರವಾಗಿ ನನ್ನ  ಹೃದಯದ ಛೇಂಬರ್ ನೊಳಗೆ ನಡೆದು ಬಂದುಬಿಟ್ಟನಲ್ಲಾ? ಅದು ಹೇಗೆ ಬಂದ? ಅದು ಅಷ್ಟೊಂದು ಸುಲಭವೇ - ಹೃದಯದೊಳಗೆ ಬರುವುದು, ಮನಸಿನಲ್ಲಿ ಗೂಡುಕಟ್ಟಿಕೊಳ್ಳುವುದು? ಮನದ ಬಾಗಿಲನ್ನು ಮುಚ್ಚೇ ಇದ್ದೆ. ಬಹುಶಃ ಎದೆಗೂಡಿನ ಕಿಟಕಿ ಹಾಕುವುದನ್ನು ಮರೆತೆನಂತೆ ಕಾಣುತ್ತದೆ. ಮುಂಗಾರುಮಳೆಯ ಆ ಸಂಜೆ ತೀಡುತ್ತಿದ್ದ ಗಾಳಿಗೆ ಎದೆಯ ಗೂಡಿನ ಬಳಿ ಏನೋ ಸದ್ದು. ಕಿಟಕಿ ಹಾಗೇ ತೆರೆದುಕೊಂಡಿತು. ತುಂತುರು ಮಳೆಗೆ ಮೈಯೆಲ್ಲಾ ಮುದ್ದೆ ಮುದ್ದೆ. "ಆಯಿಯೇ, ಬಾರಿಷೋಂ ಕಾ ಮೌಸಮ್ ಹೈ; ಹರ್ ಗಲೀ ಆಷಿಕೋಂ ಕಾ ಮೌಸಮ್ ಹೈ" ಪಂಕಜ್ ಉದಾಸ್‍ನ ಗಝಲ್ ಮನಸನ್ನು ತಾಕಿತ್ತು. ಆಷಿಕೀ, ದಿಲ್, ಪ್ಯಾರ್, ಮೊಹಬ್ಬತ್...ಈ ಪದಗಳ ಮೇಲೆ ತುಸು ಕೋಪ, ಸಾಕಷ್ಟು ಕ್ರೇಜ್ ನನಗೆ.

ಮೈ, ಮನಸ್ಸು ಎರಡೂ ಸೇರಿಕೊಂಡು ನನ್ನೊಡನೆ ಜಗಳಕ್ಕೆ ಬಿದ್ದಿವೆ. ಮಾತುಮಾತಿಗೂ ಅವನನ್ನೇ ನೆನಪಿಸುತ್ತಿವೆ. ನಿಂತಲ್ಲಿ ನಿಲ್ಲಲು ಬಿಡುತ್ತಿಲ್ಲ. ಮನಸ್ಸು ಅಲ್ಲೋಲ ಕಲ್ಲೋಲ.  ನಿಜ ಹೇಳಬೇಕಂದ್ರೆ ನನ್ನ ದೇಹವೀಗ ಅಲ್ಲೋಲ ಕಲ್ಲೋಲ.

Where were you my love?

ಈಗೇನಾ ಬರುವುದು?

ಸೆಳೆತ.....ತಪ್ಪಿಸಿಕೊಳ್ಳಲಾಗದಷ್ಟು ಸೆಳೆತ
feminity....masculanity ಯ ಮಧ್ಯೆ
ಅಂತ್ಯವಿರದ ಸೆಳೆತ
ಎರಡು ಅಯಸ್ಕಾಂತ ಧೃವಗಳ ಮಧ್ಯೆ
ಎರಡು ದೇಹಗಳ ಮಧ್ಯೆ ಅವಿರತ ಸೆಳೆತ

ನಿಮಗೆ ಮೊದಲೇ ಹೇಳಿಬಿಡುತ್ತೇನೆ
ನನ್ನದೇನೂ ತಪ್ಪಿಲ್ಲವೆಂದು
ನನ್ನ ಮೇಲೆ ಅವನು ಸಮುದ್ರವಾಗಿ ಪ್ರವಹಿಸಿದರೂ
ಆತನ ಮೇಲೆ ನಾನು ಬೆಳದಿಂಗಳಾಗಿ ಸುರಿದರೂ
ಅದಕ್ಕೆ estrozen ನ್ನೇ ಹೊಣೆ.

ತೆಲುಗು ಮೂಲ : ಮೆಹಜಬೀನ್
ಕನ್ನಡಕ್ಕೆ : ಹರೀಶ್ ಗಂಗಭೈರಯ್ಯ 

[ತೆಲುಗು ಕವಿಯತ್ರಿ ಮೆಹಜಬೀನ್ ಬರೆದ ಲೇಖನವೊಂದರ ಕನ್ನಡ ಅನುವಾದ. "Highly influenced by Arun Sagar's poem 'Where were you my life' ಎಂದು ಸ್ವತಃ ಕವಿಯತ್ರಿಯೇ ಬರೆದುಕೊಂಡಿದ್ದಾರೆ.]

[05.01.2014, B-6/23, JNV Puducherry]

No comments:

Post a Comment