Feb 5, 2014

ಇಲ್ಲಿ ಎಷ್ಟೊಂದು ಕಣ್ಣುಗಳು

ಕುರುಡುಗಣ್ಣಿನ ಕನಸೊಂದು ಚಿತ್ತಾರ ಬಿಟ್ಟಿತ್ತು
ಬೆರಗುಗಣ್ಣಿನ ಜಗಕೆ ಪತ್ತಾರ ಓದಿತ್ತು
ಕಣ್ಣಲಲ್ಲ.......ಕತ್ತಲು ಮನದೊಳಗೆ

ಕಾಣುವ ಕಂಗಳಿಗೆ ಕಂಡದ್ದೆಲ್ಲ
ಆಚರಣೆ ಇಲ್ಲದ ಆದರ್ಶಗಳು
ವಾಸ್ತವದ ಪರದೆಯ ಮೇಲೆ
ಕಳ್ಳವೇಷದ ಪ್ರದರ್ಶನಗಳು
ಸಂತೆಯಲ್ಲೇ ಉಳಿದುಹೋಗಿವೆ
ಬಿಕರಿಯಾಗದ ಕನಸುಗಳು

ಇಲ್ಲಿ ಎಷ್ಟೊಂದು ಕಣ್ಣುಗಳು
ಕನಸುಗಳಿಗೇ ಬರ
ಇಲ್ಲಿ ಹೊರಗನ್ನು ಕಂಡವರು ಬಹಳ
ಒಳಗನ್ನು ಅರಿತವರು ವಿರಳ
ಮಸ್ತಿಷ್ಕದ ಕತ್ತಲಿಗೆ
ಅನುಭವದೀಪದ ಕೊರತೆ

ಇಲ್ಲಿ ಭೂತಕ್ಕೂ ವರ್ತಮಾನಕ್ಕೂ ಸಂಬಂಧವಿಲ್ಲ
ವರ್ತಮಾನಕ್ಕೆ ಯಾವುದೇ ಭವಿಷ್ಯವಿಲ್ಲ
ಆಶ್ಚರ್ಯವಲ್ಲ
ಕಡು ವಾಸ್ತವ

ಅಳಿದುಳಿದ ಅವಶೇಷಗಳ ನಡುವೆ
ಆತ್ಮಾಭಿಮಾನ ಕಾಣೆಯಾದಾಗ
ತರಗೆಲೆಗಳಂತೆ ತೂರಿ ಹೋದದ್ದು
ನಮ್ಮವೇ ಬದುಕುಗಳು

ಹೌದು. ಇಲ್ಲಿ ಯಾರ ನಸೀಬಿನಲ್ಲೂ ಬೆಳಕಿಲ್ಲ !

ಆದರೂ
ಇಲ್ಲಿ ಮೇಲೇರಿದರೆ ಪಟ್ಟ
ಜಾರಿ ಬಿದ್ದವ ಕೆಟ್ಟ
ಎಂದು ನಂಬಿದವರೇ ಎಲ್ಲ....
ಅಸಲು ವೈರಿ ಯಾರೆಂದು ತಿಳಿಯದೆ
ಕತ್ತಲಲ್ಲಿ ಕರಿ ಬೆಕ್ಕನ್ನು ಹುಡುಕಿದ ಕುರುಡರೇ ಎಲ್ಲ

ನನ್ನ ಕಣ್ಣು ಗಳು
ನಕ್ಷತ್ರಗಳೊಡನೆ ಮಾತನಾಡುತ್ತಿವೆ
ಅದೂ ಯಾರಿಗೂ ಅರ್ಥವಾಗದ ಭಾಷೆಯಲ್ಲಿ
ಈ ಅನಂತ ವಿಶ್ವದಲ್ಲಿ
ನಾನು, ನನ್ನದು ಏನೂ ಇಲ್ಲವೆಂದು
ತೆರೆದ ಕಣ್ಣುಗಳಿಗೆ ತಿಳಿಯುತ್ತಿತ್ತು
ವೈರಿಯ ನಿಜ ಬಣ್ಣ ಬಯಲಾಗಿತ್ತು

ನಸುಕಿನಲ್ಲಿ ಆಗಸದಿಂದ ಹಾರಿಬಂದ
ಹದ್ದುಗಳ ಕೊಕ್ಕಿನಲ್ಲಿ
ನನ್ನ ಕಣ್ಣುಗಳು

ಇಲ್ಲಿ ಎಷ್ಟೊಂದು ಕಣ್ಣುಗಳು
ಎಷ್ಟೊಂದು ಕನಸುಗಳು

ಕಾಣೆಯದದ್ದು ಮಾತ್ರ
ನನ್ನವೇ ಕಣ್ಣುಗಳು
ನನ್ನವೇ ಕನಸುಗಳು!





No comments:

Post a Comment