
ಆತ ಹಳ್ಳಿಯಲ್ಲಿದ್ದಾಗ
ನೆಂಟರಿಷ್ಟರಿಗಾಗಿ ಕಾಯುತ್ತಿದ್ದ
ಅವರೊಡನೆ ಕಷ್ಟ-ಸುಖ ಹಂಚಿಕೊಳ್ಳುತ್ತಿದ್ದ
ಬಂದವರನ್ನು ಆದರದಿಂದ ಸತ್ಕರಿಸಿ
ಹೊಲ ಗದ್ದೆಗಳಲ್ಲಿನ ಬೆಳೆ
ಕಾಡಲ್ಲಿ ಅರಳಿದ ಹೂಗಳು
ಕೆರೆಯ ಸುತ್ತಲಿನ ಹಸಿರು ಹುಲ್ಲು
ದನ ಕರುಗಳು
ಕುರಿ ಮೇಕೆಗಳು
ಹಳ್ಳಿಯ ಯುವಕರ ನಡವಳಿಕೆ
ಹೀಗೆ ಸುಮಾರು ವಿಷಯಗಳ ಬಗ್ಗೆ
ರಾತ್ರಿಯೆಲ್ಲಾ ಮಾತನಾಡುತ್ತಾ
ಭಾವ ಪರವಶನಾಗುತ್ತಿದ್ದ.
ಆತ ಒಂದು ದಿನ ಪಟ್ಟಣಕ್ಕೆ ಹೋದವನು
ಹಳ್ಳಿಗೆ ಹಿಂದಿರುಗಿ ಬರಲಿಲ್ಲ
ಈಗ ಯಾವ ನೆಂಟರಿಷ್ಟರಿಗಾಗಿಯೂ
ಕಾಯುವುದಿಲ್ಲ ಆತ.
ಅವನ ಮುಂದೀಗ ಒಂದು ಟಿ.ವಿ.
ಕಾಲಹರಣ ಮಾಡೋಕೆ, ಮಾತನಾಡೋಕೆ
ಭಾಷೆ ಅರ್ಥವಾಗದಿದ್ದರೂ
ದೃಷ್ಟಿ ಮಾತ್ರ ಅದರೆಡೆಗೇ
ನೆಂಟರು ಬಂದರೆ "ಬನ್ನಿ" ಅಂತಾನೆ
ಅವರನ್ನು ಕೇಳುತ್ತಾನೆ -
ಊರಿನ ಆಗು-ಹೋಗುಗಳ ಬಗ್ಗೆ
ಇತಿಹಾಸದ ಪುಸ್ತಕದಂತೆ.
ಹಳ್ಳಿಯ ಕೊಳಕು ರಾಜಕೀಯದ ಬಗ್ಗೆ ಕೋಪ ಅವನಿಗೆ
ಊರು ಬದಲಾಗೋಯ್ತು ಎಂದು ವಟಗುಟ್ಟುತ್ತಾನೆ
ತಾನು? ಬದಲಾಗಿದ್ದೇನೆಂದು
ಒಪ್ಪಿಕೊಳ್ಳುವ ಮಾತೇ ಇಲ್ಲ.
ಊರಿನ ಒಳ್ಳೆಯ ಸುದ್ದಿ ಕೇಳಿ
ನಿಟ್ಟುಸಿರು ಬಿಡುತ್ತಾನೆ
ಊರಿನ್ನೂ ಜೀವಂತವಾಗಿದೆಯೆಂದು.
ಈಗ ದೊಡ್ಡ ನಗರಕ್ಕೆ ಬಂದಿದ್ದಾನೆ
ನೆಂಟರೇ ಬೇಕಾಗಿಲ್ಲ ಅವನಿಗೀಗ
ಅವರಿಂದ ದೂರವಿರಬೇಕೆಂಬ ಪ್ರಯತ್ನ
ಯಾರಾದರೂ ಅಪ್ಪಿತಪ್ಪಿ ಬಂದರೋ
ಒಳಗೊಳಗೇ ಬೈದುಕೊಳ್ಳುತ್ತಾನೆ
ಏರುತ್ತಿರುವ ಬೆಲೆಗಳ ಬಗ್ಗೆ
ನಗರಗಳೊಡನೆ ಗಂಟುಹಾಕಿಕೊಂಡ ಬದುಕಿನ ಬಗ್ಗೆ
ಸಿಡಿಮಿಡಿಗೊಳ್ಳುತ್ತಾನೆ.
ಯಾರೊಂದಿಗೂ ಹಂಚಿಕೊಳ್ಳಲು ಇಷ್ಟವಿಲ್ಲ ಅವನಿಗೆ -
ಬೀಸೆಣಿಗೆಯ ಗಾಳಿಯನ್ನು
ಬುತ್ತಿಯೊಳಗಿನ ತುತ್ತನ್ನು
ಹಾಸುತ್ತಿದ್ದ ಚಾಪೆಯನ್ನು.
ಹಿಂದಿ ಮೂಲ: ತ್ರಿಪೇನ್ ಸಿಂಹ ಚೌಹಾಣ್
ಕನ್ನಡಕ್ಕೆ: ಹರೀಶ್. ಜಿ.
No comments:
Post a Comment